ವರದಹಳ್ಳಿ
	ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿ ನಲ್ಲಿರುವ ಒಂದು ಪುಣ್ಯಕ್ಷೇತ್ರ. ಇಕ್ಕೇರಿ ಮತ್ತು ವರದಾ ಮೂಲಗಳು ಇದಕ್ಕೆ ಸಮೀಪದಲ್ಲಿವೆ. ಭಗವಾನ್ ಶ್ರೀಧರಸ್ವಾಮಿಗಳು ಇಲ್ಲಿ ಆಶ್ರಮ ಸ್ಥಾಪಿಸಿ ಪಾಳುಬಿದ್ದ ದುರ್ಗಾದೇವಿ ದೇವಾಲಯವನ್ನು ಪುನರುತ್ಥಾನ ಮಾಡಿದರು. ಇದರಿಂದಾಗಿ ಸುಮಾರು ನೂರೈವತ್ತು ವರ್ಷಗಳಿಂದಲೂ ಕಗ್ಗಾಡಾಗಿದ್ದ ಈ ಗ್ರಾಮ ಪುಣ್ಯಕ್ಷೇತ್ರವಾಯಿತು. ಇಲ್ಲೊಂದು ಬೃಹತ್ ಗುಡ್ಡವಿದ್ದು ಇದರ ಬುಡದಲ್ಲಿ ದುರ್ಗಾಂಬಾ ದೇವಾಲಯವಿದೆ. ವ್ಯಾಸರಿಂದ ಪ್ರತಿಷ್ಠಿತವಾದ ಸರಸ್ವತೀ ಪೀಠವೆಂದು ಇದು ಹೆಸರಾಗಿದೆ.

	ಹದಿಮೂರನೆಯ ಶತಮಾನದಲ್ಲಿ ಶಂಕರ ಸಂಪ್ರದಾಯದ ಗೋಕರ್ಣದ ಶ್ರೀರಾಮೇಶ್ವರ ಪೀಠವೊಂದು ಇಲ್ಲಿತ್ತೆಂದೂ ಸುಮಾರು ಆರು ಶತಮಾನ ಪರ್ಯಂತ ಇದು ಜ್ಞಾನಕೇಂದ್ರವಾಗಿತ್ತೆಂದೂ ಮುಂದೆ ಉತ್ತರಾಧಿಕಾರಿಗಳಿಲ್ಲದೆ ಇದರ ಧಾರ್ಮಿಕ ಚಟುವಟಿಕೆಗಳೇ ನಿಂತುಹೋದು ವೆಂದೂ ಹೇಳಲಾಗಿದೆ. ಈ ಮಾತಿಗೆ ಪೋಷಕವಾಗಿ ಇಲ್ಲಿ ಹಿಂದಿನ ಮಠಾಧಿಪತಿಗಳ ಅನೇಕ ಸಮಾಧಿಗಳಿವೆ.

	ವರದಹಳ್ಳಿ ಅನೇಕ ತೀರ್ಥಗಳ ಕ್ಷೇತ್ರ. ದುರ್ಗಾದೇವಿಯ ಎಡಭಾಗ ದಲ್ಲಿ ದೇವಿತೀರ್ಥ, ಪಾಕಶಾಲೆಯ ಪಕ್ಕದಲ್ಲಿ ಆಹ್ನಿಕತೀರ್ಥಕುಂಡಗಳಿವೆ. ನೂತನವಾಗಿ ನಿರ್ಮಿಸಿರುವ ವಿಶಾಲವಾದ ಚಂದ್ರಶಾಲೆ ದೇವಾಲಯವನ್ನು ಸುತ್ತುವರಿದಿದೆ. ವ್ಯಾಸರ ಹೆಸರಿನ ಗುಹೆಯೊಂದು ಇಲ್ಲಿದೆ. ಇಲ್ಲಿಯ ಮುಖ್ಯ ಆಕರ್ಷಣೆ ಶ್ರೀಧರಸ್ವಾಮಿಗಳ ಆಶ್ರಮವಿರುವ ಎತ್ತರವಾದ ಬೆಟ್ಟ. ಯಾತ್ರಿಕರು ಅಗಸ್ತ್ಯತೀರ್ಥದಲ್ಲಿ ಮಿಂದು ದೇವಿ ದರ್ಶನಮಾಡಿ ಬೆಟ್ಟಹತ್ತುತ್ತಾರೆ. ಬೆಟ್ಟ ಹತ್ತುವಾಗ ದಾರಿಯಲ್ಲಿ ವಿಶ್ರಾಂತಿ ಕುಟಿ, ಶ್ರೀಧರ ಸಾಂಗ ವಿದ್ಯಾಲಯಗಳಿವೆ. ಈ ವಿದ್ಯಾಲಯದಲ್ಲಿ ವೇದಾಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀಧರಸ್ವಾಮಿಗಳು ಆರ್ಯ ಸಂಸ್ಕøತಿ ಬಗ್ಗೆ ಗ್ರಂಥವೊಂದನ್ನು ರಚಿಸಿದ್ದು ಇಲ್ಲೇ.							
		(ಸಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ